ಗ್ಲೋರಿಯೋಸ

ಲಿಲ್ಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಲಶುನ ಸಸ್ಯಜಾತಿ.  ಇದರಲ್ಲಿ ಹಲವಾರು ಪ್ರಭೇದಗಳಿವೆ.  ಭಾರತದಲ್ಲಿ ಸುಪರ್ಬ ಎಂಬ ಒಂದು ಪ್ರಭೇದ ಬೆಳೆಯುತ್ತದೆ.  ಇದಕ್ಕೆ ಇಂಗ್ಲೀಷಿನಲ್ಲಿ ಸರ್ಪೆಂಟ್ಸ್ ಟಂಗ್, ಮಲಬಾರ್ ಗ್ಲೋರಿ, ಟೈಗರ್ಸ್ ಕ್ಲಾ ಮುಂತಾದ ಹೆಸರುಗಳೂ ಕನ್ನಡದಲ್ಲಿ ಕರಡಿಕಣ್ಣಿನ  ಗೆಡ್ಡೆ, ಕೋಳಿಕುಟುಮನ ಗೆಡ್ಡೆ, ಅಗ್ನಿಶಿಖೆ, ಶಿವಶಕ್ತಿ ಬಳ್ಳಿ ಮುಂತಾದ ಹೆಸರುಗಳೂ ಇವೆ.  ಕಾಡುಸಸ್ಯವಾಗಿ ಬೆಳೆಯುವ ಇದನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುವುದುಂಟು.  ಅಲ್ಲದೆ ಇದಕ್ಕೆ ಔಷಧೀಯ ಪ್ರಾಮುಖ್ಯವೂ ಇದೆ.  ಗ್ಲೋರಿಯೋಸ  ಇತರ ಆಸರೆಗಳ ಮೇಲೆ ಹಬ್ಬಿಕೊಂಡು ಬೆಳೆಯುವ ದುರ್ಬಲಕಾಂಡದ ಒಂದು ಬಳ್ಳಿ. ಇದರಲ್ಲಿ ಭೂಗತವಾಗಿರುವ ಪ್ರಕಂದವಿದೆ.  ಎಲೆಗಳು ಸರಳ; ಪರ್ಯಾಯ, ಅಭಿಮುಖ ಇಲ್ಲವೆ ವರ್ತುಲ ಮಾದರಿಗಳಲ್ಲಿ ಜೋಡಣೆಗೊಂಡಿವೆ.  ಎಲೆಗಳಿಗೆ ತೊಟ್ಟು ಇಲ್ಲ.  ಎಲೆಯ ತುದಿಗಳು ತುಂಬ ಉದ್ದವಾಗಿ ಸುರುಳಿ ಸುತ್ತಿಕೊಂಡಿರುವವು.  ಇವು ಒಂದು ರೀತಿಯ ಕುಡಿತಂತುಗಳಾಗಿ (ಟೆಂಡ್ರಿಲ್ಸ್) ಮಾರ್ಪಟ್ಟಿವೆ.  ಇವುಗಳ ಸಹಾಯದಿಂದ ಗಿಡ ಆಸರೆಗಳ ಮೇಲೆ ಹಬ್ಬುತ್ತವೆ.  ಹೂಗಳು ಎಲೆಗಳ ಕಂಕುಳಲ್ಲಿ ಒಂಟೊಂಟಿಯಾಗಿ ಅರಳುತ್ತವೆ.  ಇವು ದೊಡ್ಡ ಗಾತ್ರದವು.  ಮೊದಲು ಹಸಿರು ಬಣ್ಣಕ್ಕಿದ್ದು, ಬರಬರುತ್ತ ಹಳದಿ, ಕಡುಗೆಂಪು ಬಣ್ಣವನ್ನು ತಳೆಯುವುದರಿಂದ ಬಹಳ ಆಕರ್ಷಕವಾಗಿರುತ್ತದೆ.  ಪೆರಿಯಾಂತ್ ಹಾಲೆಗಳು ಹಿಮ್ಮುಖವಾಗಿ ಬಾಗಿರುವುದು ಹೂಗಳ ವಿಶಿಷ್ಟ ಲಕ್ಷಣ.  ಕೇಸರಗಳು 6. ಅಂಡಾಶಯ ಉಚ್ಚಸ್ಥಾನದ್ದು; 3. ಕಾರ್ಪೆಲುಗಳಿಂದ ಕೂಡಿದೆ.  ಕಾಯಿ ಸಂಪುಟ ಮಾದರಿಯದು.

ಗ್ಲೋರಿಯೋಸವನ್ನು ಬೀಜಗಳಿಂದ ಮತ್ತು ಪ್ರಕಂದದ ತುಂಡುಗಳಿಂದ ವೃದ್ಧಿಮಾಡಬಹುದು.  ಪ್ರಕಂದದ ತುಂಡುಗಳಿಂದ ವೃದ್ಧಿಮಾಡುವುದು ಬಹಳ ಸುಲಭ.  ಇವನ್ನು ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ನೆಡಬೇಕು.  ಕಾಲಕ್ಕನುಸಾರವಾಗಿ ನೀರನ್ನು ಹಾಕಬೇಕು.  ಜುಲೈ -ಸಪ್ಟೆಂಬರ್ ವೇಳೆಗೆ ಹೂ ಅರಳಲು ಪ್ರಾರಂಭಿಸುತ್ತವೆ.  ಗ್ಲೋರಿಯೋಸದ ಪ್ರಕಂದಕ್ಕೆ ಶಕ್ತಿವರ್ಧಕ, ಜಂತುನಾಶಕ ಗುಣಗಳಿವೆ.  ಗಾನರೀಯ, ಕೆಲವು ಬಗೆಯ ಚರ್ಮವ್ಯಾಧಿಗಳು, ಹೊಟ್ಟೆ ನುಲಿತ ಮುಂತಾದವುಗಳ ಚಿಕಿತ್ಸೆಗೂ ಇದನ್ನು ಬಳಸಲಾಗುತ್ತದೆ.  ಎಲೆಯ ರಸವನ್ನು ಹೇನುನಿರ್ಮೂಲನಕ್ಕೆ ಉಪಯೋಗಿಸುವುದುಂಟು.  					(ಎಂ.ಎಚ್.ಎಂ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ